Alvas Virasat 2015

Alvas Virasat > Press Release > ಆಳ್ವಾಸ್ ವಿರಾಸತ್ ೨೦೧೫ರ ಪ್ರಶಸ್ತಿಗೆ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಯ್ಕೆ

ಆಳ್ವಾಸ್ ವಿರಾಸತ್ ೨೦೧೫ರ ಪ್ರಶಸ್ತಿಗೆ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಯ್ಕೆ

spb

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹೆಮ್ಮೆಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ತಿಂಗಳ ೨೪ರಿಂದ ೨೭ರವರೆಗೆ ಜರುಗಲಿದೆ. ಆಳ್ವಾಸ್ ಆವರಣದ ಪುತ್ತಿಗೆ ವಿವೇಕಾನಂದನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಇದಕ್ಕಾಗಿ ಸಜ್ಜುಗೊಂಡಿದೆ. ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಪ್ರತಿಭೆಯೊಂದನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮ ಆಳ್ವಾಸ್ ವಿರಾಸತ್‌ನ ಮೊದಲ ದಿನ ನಡೆಯಲಿದೆ. ಆಳ್ವಾಸ್ ವಿರಾಸತ್ ೨೦೧೫ರ ಈ ಪ್ರಶಸ್ತಿಗೆ ಖ್ಯಾತ ಹಿನ್ನಲೆ ಗಾಯಕರಾದ ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂರವರನ್ನು ಆಯ್ಕೆ ಮಾಡಲಾಗಿದೆ. ಅಪಾರ ಜನಸ್ತೋಮದ ಮಧ್ಯೆ ಪ್ರಶಸ್ತಿ ಫಲಕದೊಂದಿಗೆ ಒಂದು ಲಕ್ಷ ನಗದನ್ನು ನೀಡಿ ಅವರನ್ನು ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಿನ್ನಲೆ ಗಾಯನ ಕ್ಷೇತ್ರದಲ್ಲಿ ಎಸ್.ಪಿ. ಎಂದೇ ಚಿರಪರಿಚಿತರಾಗಿರುವವರು ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ತನ್ನ ಕಂಠ ಶ್ರೀಮಂತಿಕೆಯಿಂದಾಗಿ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವವರು. ಎಳವೆಯಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಚೆನ್ನೈನಲ್ಲಿ ನಡೆದ ’ಟ್ಯಾಲೆಂಟ್ ಸ್ಪೊಟಿಂಗ್ ಕಂಟೆಸ್ಟ್’ನ ಮೂಲಕ ಬೆಳಕಿಗೆ ಬಂದ ಇವರು ಶ್ರೀ, ಶ್ರೀ ಮರ‍್ಯಾದಾರಾಮಣ್ಣ’ ತೆಲುಗು ಚಿತ್ರದ ಮೂಲಕ ಹಿನ್ನಲೆ ಗಾಯನ ಪ್ರಯಾಣವನ್ನು ಪ್ರಾರಂಭಿಸಿದರು. ತಮ್ಮ ಧ್ವನಿಯ ಇಂಪು, ಮಾಧುರ್ಯ, ಶಕ್ತಿ ಹಾಗೂ ಅನುಭವಿಸಿ ಹಾಡುವ ವಿಶೇಷತೆಗಳಿಂದ ಇವರು ಬಹುಬೇಗನೆ ಪ್ರಸಿದ್ಧಿಗೆ ಬಂದರು. ಇವರ ೪೦ ವರ್ಷಗಳ ಗಾಯನ ಪಯಣದಲ್ಲಿ ಚಿತ್ರಗೀತೆ-ಭಕ್ತಿಗೀತೆಗಳ ೩೫,೦೦೦ ಕ್ಕಿಂತ ಹೆಚ್ಚು ಹಾಡುಗಳು ಧ್ವನಿಸುರುಳಿಗಳಾಗಿದೆ. ಸುಮಾರು ೧೫ ಭಾಷೆಗಳಲ್ಲಿ ಮಾತೃಭಾಷೆಯೆಂಬಂತೆ ಸರಳವಾಗಿ ಇವರು ಹಾಡಿದ್ದಾರೆ. ವಿವಿಧ ಭಾಷೆಗಳ ೪೫ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ, ವಿವಿಧ ಭಾಷೆಗಳ ೪೫ ಚಿತ್ರಗಳಲ್ಲಿ ನಟಿಸಿದ್ದಾರೆ, ೧೦೦ಕ್ಕಿಂತಲೂ ಹೆಚ್ಚು ವಿವಿಧ ಭಾಷೆಗಳ ಚಿತ್ರಗಳಿಗೆ ಕಂಠದಾನ ಮಾಡಿದ್ದಾರೆ. ಚಿತ್ರ ನಿರ್ಮಾಪಕರಾಗಿಯೂ ಇವರು ಪ್ರಸಿದ್ಧರಾಗಿದ್ದಾರೆ. ಸಂಗೀತದ ಟಿ.ವಿ.ಕಾರ್ಯಕ್ರ,ಮಗಳಲ್ಲಿಯೂ ನಿರೂಪರಾಗಿ ತನ್ನ ಪ್ರತಿಭೆ ಅನಾವರಣ ಮಾಡಿದ್ದಾರೆ. ದೇಶ-ಪರದೇಶಗಳ ಸಂಘಸಂಸ್ಥೆಗಳ, ರಾಜ್ಯ ಸರಕಾರಗಳ ಪ್ರತಿಷ್ಠಿತ ಪ್ರಶಸ್ತಿಗಳೆಲ್ಲವೂ ಇವರಿಗೆ ಸಂದಿವೆ. ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿ ಇವರನ್ನು ಗೌರವಿಸಿದೆ. ಕೇಂದ್ರ ಸರಕಾರದ ಪ್ರತಿಪ್ಠಿತ ಪ್ರಶಸ್ತಿಗಳಾದ ಪದ್ಮಶೀ, ಪದ್ಮಭೂಷಣ ಪ್ರಶಸ್ತಿಗಳು ಇವರನ್ನು ಆರಸಿಕೊಂಡು ಬಂದಿದೆ.

 – ಡಾ| ಎಂ.ಮೋಹನ ಆಳ್ವ