Alvas Virasat 2015

Alvas Virasat > Press Release > ಆಳ್ವಾಸ್ ವರ್ಣ ವಿರಾಸತ್ – 2015

ಆಳ್ವಾಸ್ ವರ್ಣ ವಿರಾಸತ್ – 2015

ಆಳ್ವಾಸ್ ವಿರಾಸತ್ 2015ರ ಅಂಗವಾಗಿ ಮೂಡಬಿದಿರೆ ವಿದ್ಯಾಗಿರಿಯಲ್ಲಿ ಡಿಸೆಂಬರ್ 20 ರಿಂದ 27 ರವರೆಗೆ ಎಂಟು ದಿನಗಳ ರಾಷ್ಟ್ರಮಟ್ಟದ ಆದಿವಾಸಿ ಚಿತ್ರಕಲಾ ಶಿಬಿರ ಹಾಗೂ 23 ರಿಂದ 27ರವರೆಗೆ ಐದು ದಿನಗಳ ಸಮಕಾಲೀನ ಚಿತ್ರಕಲಾ ಶಿಬಿರ ’ಆಳ್ವಾಸ್ ವರ್ಣವಿರಾಸತ್ 2015ನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ಕಲಾವಿದರೊಂದಿಗೆ ಮುಕ್ತ ಮಾತುಕತೆ ನಡೆಸಲು ಹಾಗೂ ಕಲಾಕೃತಿ ರಚನಾ ಪ್ರಕ್ರಿಯೆಯನ್ನು ಸವಿಯಲು ಸಾರ್ವಜನಿಕರಿಗೆ ಸದಾವಕಾಶವಿರುತ್ತದೆ.

ಈ ಶಿಬಿರದಲ್ಲಿ ಬಿಹಾರದಿಂದ ಶ್ರವಣ್ ಕುಮಾರ್ ಪಾಸ್ವಾನ್, ಊರ್ಮಿಳಾ ದೇವಿ, ಮಂಜು ದೇವಿ, ಸುಲೇಖಾ ದೇವಿ, ಕೈಲಾಶ್ ದೇವಿ, ಪವನ್ ಸಾಗರ್, ಅನಿತಾ ಬಾರ್ಯ, ಗಂಗೋತ್ರಿ ಟೇಕಮ್, ರಾಜಸ್ಥಾನದ ಓಂ ಪ್ರಕಾಶ್, ಗುಜರಾತ್‌ನ ಜಗದೀಶ್ ವಾಗಿ ಭಾಯಿ, ಪರೇಶ್, ಮಹಾರಾಷ್ಟ್ರದ ಮೀನಾಕ್ಷಿ ವಾಸುದೇವ್ ವೈಡಾ, ರಾಜೇಂದ್ರ ವೈಡಾ, ಛತ್ತೀಸ್‌ಘಡ್‌ನ ಆಗ್ನೇಶ್ ಕಾರ್ಕೆಟ್ಟಾ ಹಾಗೂ ಕರ್ನಾಟಕದ ಈಶ್ವರ ನಾಕ್ಸೇರಿದಂತೆ ಸುಮಾರು ೧೫ ಆದಿವಾಸಿ ಮತ್ತು ಸಾಂಪ್ರದಾಯಿಕ ಕಲಾವಿದರು ವರ್ಲಿ, ಗೋಂಡು, ಭಿಲ್, ಪಡ್, ಬಿತಾರ, ಮಧುಬನಿ, ಮೀನಾ, ಕಲಾಂಕಾರಿ ಹಾಗೂ ಹಸೆಚಿತ್ರ ಕಲಾ ಪ್ರಕಾರಗಳಲ್ಲಿ ತಮ್ಮ ಕಲಾಕೃತಿಗಳ ರಚನೆ ಮತ್ತು ಮಾರಾಟ ಮಾಡಲಿದ್ದಾರೆ.

ಸಮಕಾಲೀನ ಚಿತ್ರಕಲಾ ಶಿಬಿರದಲ್ಲಿ ದೆಹಲಿಯ ಸಂಜೀಬ್ ಗೋಗೋಯಿ, ಮುಂಬಯಿಯ ದೇವುದಾಸ್ ಶೆಟ್ಟಿ, ಯೋಗೀತಾ, ಒಡಿಶಾದ ರಮನಿ ರಂಜನ್ ಸಾರಂಗಿ, ಸಂತೋಷ್ ಕುಮಾರ್ ರೌತರಾಯ್, ಕೇರಳದ ಜ್ಯೋತಿ ಆಲ್ವ, ಸುಮೇಶ್ ಕಂಬಲ್ಲೂರ್, ಆಂಟೋ ಜಾರ್ಜ್, ತಮಿಳುನಾಡಿನ ಕಾಸ ವಿನಯ್ ಕುಮಾರ್, ಆಂಧ್ರಪ್ರದೇಶದ ಅಕ್ಷಯ್ ಆನಂದ, ಮಧ್ಯಪ್ರದೇಶದ ಅನಿಲ್ ಗಾಯಕ್ವಾಡ್, ಉತ್ತರಪ್ರದೇಶದ ವಿಗ್ಯಾನ್, ಪಾಂಡಿಚೇರಿಯ ಸರವನನ್, ತಿರುಮೋಳೆ, ಚತ್ತೀಸ್‌ಗಢ್‌ನ ಸುನೀತಾ ವರ್ಮ, ಕರ್ನಾಟಕದ ಚಂದ್ರಹಾಸ್ ಜಾಲಿಹಲ್, ಸಂಧ್ಯಾ ಶಿರ್ಸಿ, ಜಗದೀಶ್ ಕಾಂಬ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸುಮಾರು ೨೦ ಶ್ರೇಷ್ಠ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.

manu_parekhಪದ್ಮಶ್ರೀ ಡಾ. ಮನು ಪರೇಖ್ ರವರಿಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ

1939ರಲ್ಲಿ ಗುಜರಾತ್‌ನ ಅಹಮಾದಾಬಾದ್‌ನಲ್ಲಿ ಜನಿಸಿದ ಪದ್ಮಶ್ರೀ ಡಾ. ಮನು ಪರೇಖ್‌ರವರು ತಮ್ಮ ಆರಂಭಿಕ ಕಲಾಶಿಕ್ಷಣವನ್ನು ಮುಕುಂದ್ ಶ್ರಾಪ್ ಬಳಿ ಪಡೆದರು. ಬಳಿಕ 1962ರಲ್ಲಿ ಮುಂಬಾಯಿಯ ಸರ್ ಜಮ್ಸೇಟ್ಜೀ ಜೀಜಾಭಾಯಿ ಕಲಾ ಶಾಲೆಯಲ್ಲಿ ಕಲಾ ಪದವಿಯನ್ನು ಪಡೆದರು. ರಂಗ ಭೂಮಿಯ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಒಂದು ವರ್ಷ ನಟನಾಗಿಯೂ, ವೇದಿಕೆ ವಿನ್ಯಾಸಕಾರನಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಎರಡು ವರ್ಷಗಳ ಕಾಲ ಮುಂಬಾಯಿಯ ವೀವರ್ಸ್ ಸೇವಾ ಕೇಂದ್ರದಲ್ಲಿ ಕಲಾವಿನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ ದೆಹಲಿಯ ಕರಕುಶಲ ಹಾಗೂ ಕೈಮಗ್ಗ ರಪ್ತು ನಿಗಮದಲ್ಲಿ ವಿನ್ಯಾಸ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಆ ಬಳಿಕ ವೃತ್ತಿಯನ್ನು ತೊರೆದು ಸ್ವತಂತ್ರ ಕಲಾವಿದರಾಗಿ ಮುಂದುವರೆದರು.

ಶ್ರೀಯುತ ಪರೇಖ್‌ರವರು ಆಧುನಿಕ ಕಲೆಯಲ್ಲಿ ವಿಶೇಷ ಪರಿಣಿತರಾಗಿದ್ದು ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ ಹಾಗೂ ವಾಷಿಂಗ್ಟನ್ ಡಿ.ಸಿ. ನ್ಯೂಯಾರ್ಕ್, ಲಂಡನ್, ಇಟಲಿ, ಡೆನ್ಮಾರ್ಕ್ ಸೇರಿದಂತೆ ಹಲವಾರು ಬಾರಿ ದೇಶ ವಿದೇಶಗಳಲ್ಲಿ ತಮ್ಮ ಕಲಾಕೃತಿಗಳ ಹಲವಾರು ಏಕ ವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ ತಮ್ಮ ಕಲಾಕೃತಿಗಳನ್ನು ಹರಾಜು ಮಾಡಿ ಬಂದ ಹಣವನ್ನು ಹೆಲ್ಪೇಜ್ ಇಂಡಿಯಾಗೆ ನೀಡಿದ್ದಾರೆ.

ಎರಡು ಬಾರಿ ಭಿರ್ಲಾ ಕಲೆ ಮತ್ತು ಸಂಸ್ಕೃತಿ ಇಲಾಖಾ ಪ್ರಶಸ್ತಿ, ಅಖಿಲ ಭಾರತ ಲಲಿತಾ ಕಲೆ ಮತ್ತು ಕರಕುಶಲಾ ಪ್ರಶಸ್ತಿ, ರಾಷ್ಟ್ರೀಯ ಕಲಾ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಬೆಳ್ಳಿ ಪದಕ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದು, 1991ರಲ್ಲಿ ಭಾರತ ಸರಕಾರವು ಕೊಡಮಾಡುವ ನಾಗರಿಕ ಸಮ್ಮಾನ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈಗಲೂ ಅತ್ಯಂತ ಕ್ರಿಯಾಶೀಲ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಪಸ್ತುತ ತಮ್ಮ ಪತ್ನಿ ಶ್ರೀಮತಿ ಮಾದ್ವಿಯವರೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಾರೆ.