Alvas Virasat 2015

Alvas Virasat > Press Release > ಪದ್ಮಭೂಷಣ ವಿ.ಪಿ. ಧನಂಜಯನ್‌ರವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಪದ್ಮಭೂಷಣ ವಿ.ಪಿ. ಧನಂಜಯನ್‌ರವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಪತ್ರಿಕಾ ಪ್ರಕಟನೆಗಾಗಿ

00001-130-1

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್ ೨೦೧೭’ ಜನವರಿ ೧೩, ೧೪ ಮತ್ತು ೧೫ನೇ ಶುಕ್ರವಾರದಿಂದ ಭಾನುವಾರದವರೆಗೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗವೇದಿಕೆಯಲ್ಲಿ ಜರುಗಲಿದೆ. ಜನವರಿ ೧೩ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವ ಮೂಲಕ ಈ ವರ್ಷದ ಆಳ್ವಾಸ್ ವಿರಾಸತ್‌ಗೆ ಚಾಲನೆ ನೀಡಲಿದ್ದಾರೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ. ಎನ್. ವಿನಯ ಹೆಗ್ಡೆಯವರು ಸಭಾಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ಪದ್ಮವಿಭೂಷಣ ವಿ.ಪಿ.ಧನಂಜಯನ್‌ರವರಿಗೆ ಆಳ್ವಾಸ್ ವಿರಾಸತ್ ೨೦೧೭ರ ಗೌರವ

ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್‌ರವರು ವಿ.ಪಿ. ಧನಂಜಯರೆಂದೇ ಖ್ಯಾತರು. ಎಪ್ರಿಲ್ ೩೦, ೧೯೩೯ರಲ್ಲಿ ಕೇರಳ ರಾಜ್ಯದ ಆಯುರ್ವೇದ, ಕಳರಿಫಯೆಟ್ ಮತ್ತು ಕಥಕ್ಕಳಿ ಕಲೆಗಳಿಗೆ ಹೆಸರುವಾಸಿಯಾದ ಪಯ್ಯನ್ನೂರಿನಲ್ಲಿ ಇವರು ಜನಿಸಿದರು. ತಂದೆ ಶಾಲಾ ಶಿಕ್ಷಕರಾಗಿದ್ದು, ಅವರ ೮ ಮಕ್ಕಳಲ್ಲಿ ಓರ್ವರಾಗಿ ಕಡುಬಡತನದಲ್ಲೇ ಬೆಳೆದ ಇವರ ಮೇಲೆ ತಂದೆಯವರ ನಾಟಕ ತಂಡ ಅಪಾರ ಪ್ರಭಾವಬೀರಿದೆ. ರಜಾದಿನಗಳಲ್ಲಿ ಈ ನಾಟಕ ತಂಡ ಪ್ರದರ್ಶನ ನೀಡುತ್ತಿದ್ದು ಬಾಲಕ ಧನಂಜಯನ್ ತಂಡದೊಂದಿಗೆ ಊರೂರು ಅಲೆದು ನಾಟಕದಲ್ಲಿ ಬಣ್ಣಹಚ್ಚುತ್ತಿದ್ದರು.

ಮದ್ರಾಸಿನ ಕಲಾಕ್ಷೇತ್ರದ ನಿರ್ಮಾಪಕಿ ರುಕ್ಮಿಣೀದೇವಿಯವರು ಒಬ್ಬ ಅರ್ಹ ಕಥಕ್ಕಳಿ ಮತ್ತು ಭರತನಾಟ್ಯ ಪಟುವಿಗಾಗಿ ಚಂದುಪಣಿಕ್ಕರರ ಮೂಲಕ ಅನ್ವೇಷಿಸುತ್ತಿರುವಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದವರು ವಿ.ಪಿ. ಧನಂಜಯನ್‌ರ ತಂದೆಯವರು. ಹೊಟ್ಟೆ ಹೊರೆಯುವ ಕೆಲಸ ಸ್ವಲ್ಪವಾದರೂ ಕಡಿಮೆಯಾದೀತೆಂದು ತನ್ನ ಮಗ ವಿ.ಪಿ. ಧನಂಜಯನ್‌ನನ್ನು ನಾಟ್ಯಪಟುವಾಗಿಸಲು ಅವರು ತೀರ್ಮಾನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಬಹಳ ಚುರುಕಿನ, ಸಂಸ್ಕೃತ ಭಾಷೆಯಲ್ಲಿ ಹಿಡಿತವಿರುವ ಹಾಗೂ ಆಗಲೇ ಕವಿಪ್ರತಿಭೆಯನ್ನು ಒಳಗೊಂಡಿದ್ದ ವಿ.ಪಿ. ಧನಂಜಯನ್‌ರು ಆಯ್ಕೆಯಾದುದು ಮಾತ್ರವಲ್ಲ ವಿದ್ಯಾರ್ಥಿವೇತನದ ಮೂಲಕ ವಿದ್ಯಾರ್ಜನೆಗೆ ಅರ್ಹರಾದರು. ಹೀಗೆ ಮದ್ರಾಸಿನ ಕಲಾಕ್ಷೇತ್ರವನ್ನು ತನ್ನ ಪ್ರತಿಭೆಯ ಮೂಲಕ ಪ್ರವೇಶಿಸಿದ ಶ್ರೀಯುತರು ಶ್ರೀಮತಿ ರುಕ್ಮಿಣೀದೇವಿಯವರ ಮಾರ್ಗದರ್ಶನದಲ್ಲಿ ಕಥಕ್ಕಳಿ ಮತ್ತು ಭರತನಾಟ್ಯದಲ್ಲಿ ಪಳಗಿ ಖ್ಯಾತ ಪುರುಷ ನೃತ್ಯ ಪಟುವಾಗಿ ಪ್ರಸಿದ್ಧರಾದರು. ಖ್ಯಾತ ನೃತ್ಯಗಾರ್ತಿ ಶಾಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿ.ಪಿ. ಧನಂಜಯನ್ ದಂಪತಿಗಳು ನೃತ್ಯಕ್ಷೇತ್ರದಲ್ಲಿ ’ಧನಂಜಯನ್ಸ್’ ಎಂದೇ ಖ್ಯಾತರಾಗಿದ್ದಾರೆ. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಭೂಷಣವೂ ಸೇರಿದಂತೆ ಕೇರಳ, ತಮಿಳ್ನಾಡು ಸರಕಾರಗಳ ಹಾಗೂ ಅನೇಕಾನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗಳಿಗೆ, ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ.

ಅಳ್ವಾಸ್ ವಿರಾಸತ್ ೨೦೧೭ರ ಗೌರವಕ್ಕೆ ಪಾತ್ರರಾದ ವಿ.ಪಿ.ಧನಂಜಯನ್‌ರವರಿಗೆ ರೂ. ೧,೦೦,೦೦೦ (ಒಂದು ಲಕ್ಷ) ನಗದಿನೊಂದಿಗೆ ಪ್ರಶಸ್ತಿಪತ್ರವನ್ನಿತ್ತು ಪುರಸ್ಕರಿಸಲಾಗುವುದು.

೪೦,೦೦೦ಕ್ಕಿಂತಲೂ ಹೆಚ್ಚು ಪ್ರೇಕ್ಷಕರು ಕುಳಿತು ನೋಡಬಹುದಾದ ಆಳ್ವಾಸ್ ವಿರಾಸತ್ ೨೦೧೭ಕ್ಕೆ ಈಗಾಗಲೇ ದೇಶವಿದೇಶಗಳಿಂದ ಅನೇಕಾನೇಕ ಆಸಕ್ತರು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳ ’ಆಳ್ವಾಸ್ ವಿರಾಸತ್ ೨೦೧೭’ರ ಮೂರು ದಿನಗಳು ಸಂಗೀತ ನೃತ್ಯಾಸಕ್ತರಿಗೆ ತುಂಬುಮನರಂಜನೆ ದೊರೆಯಲಿದೆ.

ಡಾ| ಎಂ. ಮೋಹನ ಆಳ್ವ