Alvas Virasat 2015

Alvas Virasat > Press Release > ಆಳ್ವಾಸ್ ವಿರಾಸತ್ ೨೦೧೭

ಆಳ್ವಾಸ್ ವಿರಾಸತ್ ೨೦೧೭

alva-s-virasat-logo-page-001

ಪತ್ರಿಕಾ ಪ್ರಕಟಣೆಗಾಗಿ.

ಆಳ್ವಾಸ್ ವಿರಾಸತ್ ೨೦೧೭

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್’ಗೆ ಇದು ೨೩ರ ಹರೆಯ. ’ಆಳ್ವಾಸ್ ವಿರಾಸತ್ ೨೦೧೭’ ಜನವರಿ ೧೩ರಿಂದ ೧೫ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದೆ. ದಿನಂಪ್ರತಿ ಮುಸ್ಸಂಜೆ ಪ್ರಾರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ಅವಧಿಗಳದ್ದಾಗಿದ್ದು ಮೊದಲ ಅವಧಿಯಲ್ಲಿ ವೈವಿಧ್ಯಪೂರ್ಣ ಸಂಗೀತವೂ ಎರಡನೇ ಅವಧಿಯಲ್ಲಿ ವಿವಿಧ ನೃತ್ಯ ಪ್ರಕಾರಗಳು ಇಲ್ಲಿ ಮೇಳೈಸಲಿವೆ.

ಆಳ್ವಾಸ್ ವಿರಾಸತ್ ಉತ್ಸವಕ್ಕೆ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ

ಮೂಡುಬಿದಿರೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಈ ವರ್ಷದ ಆಳ್ವಾಸ್ ವಿರಾಸತ್ ರಂಗೇರಲಿದೆ. ೧೫೦ ಅಡಿ ಉದ್ದ ೬೦ ಅಡಿ ಅಗಲದ ಈ ಬೃಹತ್ ವೇದಿಕೆಯು ೮೦ರಿಂದ ೧೦೦ ಕಲಾವಿದರಿರುವ ತಂಡದ ಪ್ರದರ್ಶನಕ್ಕೆ ಹೇಳಿಮಾಡಿಸಿದಂತಿದೆ. ಮಾತ್ರವಲ್ಲ ಇದೊಂದು ಬಯಲು ರಂಗ ವೇದಿಕೆಯಾಗಿದ್ದು, ಇದರ ಮೂರು ಭಾಗಗಳೂ ಸಂಪೂರ್ಣ ತೆರೆದುಕೊಂಡಿದ್ದು ವೇದಿಕೆಯಲ್ಲಿರುವ ಕಲಾವಿದರಿಗೂ ಎದುರಿಗಿರುವ ೪೦,೦೦೦ ಪ್ರೇಕ್ಷಕರಿಗೂ ಅನುಸಂಧಾನ ನಡೆಸುವುದಕ್ಕೆ ಅನುಕೂಲವಾಗಿದೆ.

ಮೊದಲ ದಿನ ಮಾತ್ರ ಸಭಾಕಾರ್ಯಕ್ರಮ

ಆಳ್ವಾಸ್ ವಿರಾಸತ್ ೨೦೧೭ರ ಪ್ರಥಮ ದಿನ ೧೩.೦೧.೨೦೧೭ರ ಶುಕ್ರವಾರದಂದು ಮಾತ್ರ ಸಭಾ ಕಾರ್ಯಕ್ರಮವಿದ್ದು ಉಳಿದ ಎರಡು ದಿನಗಳು ಯಾವುದೇ ಸಭಾಕಾರ್ಯಕ್ರಮಗಳಿರುವುದಿಲ್ಲ.

ಕಾರ್ಯಕ್ರಮದ ಮೊದಲ ದಿನ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಭಾಕಾರ್ಯಕ್ರಮವು ತೆರೆದುಕೊಳ್ಳುತ್ತಿದ್ದು, ಸಂಜೆ ೫.೩೦ರಿಂದ ೬.೪೫ರವರೆಗೆ ಕೇವಲ ೧.೧೫ ಗಂಟೆಗೆ ಸೀಮಿತವಾಗಿದೆ. ’ಆಳ್ವಾಸ್ ವಿರಾಸತ್ ೨೦೧೭’ನ್ನು ದೀಪ ಬೆಳಗಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿರುವರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ, ಪರಿಸರ ಮತ್ತು ವನ್ಯಜೀವಿ ಇಲಾಖಾ ಸಚಿವರಾದ ಶ್ರೀ ಬಿ.ರಮಾನಾಥ ರೈ ಯವರು ವಹಿಸಿಕೊಳ್ಳಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಡಾ. ಕೆ. ಜಗದೀಶ್, ಜಿಲ್ಲಾಧಿಕಾರಿಗಳು, ದ.ಕ.ಜಿಲ್ಲೆ, ಅಲ್ಲದೆ ಸಂಸದರು, ಅಧಿಕಾರಿಗಳು, ಗಣ್ಯಮಾನ್ಯರ ಗೌರವ ಉಪಸ್ಥಿತಿಯ ಮೂಲಕ ಈ ಸಭಾಕಾರ್ಯಕ್ರಮವು ನಡೆಯಲಿದೆ. ’ಆಳ್ವಾಸ್ ವಿರಾಸತ್ ೨೦೧೭’ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.

ಪದ್ಮಭೂಷಣ ವಿ.ಪಿ.ಧನಂಜಯನ್‌ರವರಿಗೆ ಆಳ್ವಾಸ್ ವಿರಾಸತ್ ೨೦೧೭ರ ಗೌರವ

ಭಾರತೀಯ ನೃತ್ಯ ಪರಂಪರೆಯಲ್ಲಿ ಕಥಕ್ಕಳಿ ಹಾಗೂ ಭರತನಾಟ್ಯ ಕ್ಷೇತ್ರದ ಅಗ್ರಮಾನ್ಯ ಹೆಸರು ಪದ್ಮಭೂಷಣ ವಿ.ಪಿ.ಧನಂಜಯನ್ ಅವರು. ಕೇರಳದ ಪಯ್ಯನ್ನೂರಿವನರಾದ ಇವರು ಮದ್ರಾಸಿನ ಕಲಾಕ್ಷೇತ್ರದಲ್ಲಿ ಶ್ರೀಮತಿ ರುಕ್ಮಿಣೀ ದೇವಿಯವರ ಮಾರ್ಗದರ್ಶನದಲ್ಲಿ ಈ ಎರಡೂ ನೃತ್ಯಪ್ರಕಾರಗಳಲ್ಲಿ ಪಳಗಿದ ಅದ್ವಿತೀಯ ನೃತ್ಯ ಸಾಧಕರು. ಖ್ಯಾತ ನೃತ್ಯ ಕಲಾವಿದೆ ಶಾಂತಾ ಅವರನ್ನು ವರಿಸಿ ನೃತ್ಯ ಕ್ಷೇತ್ರದಲ್ಲಿ ’ಧನಂಜಯನ್ಸ್’ರೆಂದೇ ಹೆಸರುವಾಸಿಯಾಗಿರುವವರು ಈ ದಂಪತಿಗಳು. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವೂ ಸೇರಿದಂತೆ ಸರಕಾರಗಳ, ಸಂಘಸಂಸ್ಥೆಗಳ, ಹಲವು ಪ್ರಶಸ್ತಿ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ. ಮೇರು ನೃತ್ಯ ಕಲಾವಿದರಾದ ಪದ್ಮಭೂಷಣ ವಿ.ಪಿ.ಧನಂಜಯನ್‌ರನ್ನು ರೂ.೧,೦೦,೦೦೦ (ಒಂದು ಲಕ್ಷ) ನಗದಿನೊಂದಿಗೆ ಪ್ರಶಸ್ತಿ ಪತ್ರವನ್ನಿತ್ತು ಪುರಸ್ಕರಿಸಲಾಗುವುದು.

ಆಳ್ವಾಸ್ ವಿರಾಸತ್ ೨೦೧೭ರ ಸಂಗೀತ ವೈವಿಧ್ಯಗಳು

ಆಳ್ವಾಸ್ ವಿರಾಸತ್ ೨೦೧೭ರ ಮೊದಲನೆಯ ದಿನ ಕರ್ನಾಟಕ ಹಾಗೂ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತಗಳ ಮೇರು ಕಲಾವಿದರಿಬ್ಬರು ಕೊಳಲು-ಬಾನ್ಸುರಿ ಜುಗಲ್ ಬಂದಿಯ ಮೂಲಕ ಪ್ರಥಮ ಬಾರಿಗೆ ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಖ್ಯಾತ ಪಕ್ಕವಾದ್ಯ ಕಲಾವಿದರ ಒಗ್ಗೂಡುವಿಕೆಯಿಂದ ಈ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರಿಗೆ ಅಪೂರ್ವ ಅನುಭೂತಿಯನ್ನು ಉಂಟುಮಾಡಲಿದೆ. ದಿನಾಂಕ ೧೪ರಂದು ’ನಾದಮಾಧುರ್ಯ’ದಲ್ಲಿ ದೇಶದ ಅತ್ಯುನ್ನತ ವಾದ್ಯ ಕಲಾವಿದರು ಒಟ್ಟಾಗಲಿದ್ದಾರೆ. ವಾದ್ಯ ಪ್ರ್ರಕಾರಗಳಲ್ಲಿ ಮಾಂತ್ರಿಕ ಹಿಡಿತವಿರುವ ಈ ಕಲಾವಿದರ ಒಟ್ಟುಗೂಡುವಿಕೆಯಿಂದ ಅತ್ಯದ್ಭುತ ನಾದವೈವಿಧ್ಯವು ವಿರಾಸತ್‌ನಲ್ಲಿ ಮೈತಳೆಯಲಿದೆ.

ಬೆಂಗಳೂರಿನ ಮಾಸ್ಟರ್ ರಾಹುಲ್ ವೆಲ್ಲಾಲ್ ಒಂಬತ್ತು ವರ್ಷದ ಪೋರ. ದೇವರ ನಾಮದ ಅತ್ಯಂತ ಶುಶ್ರಾವ್ಯ ಹಾಗೂ ಮಾಧುರ್ಯದ ಹಾಡುಗಾರಿಕೆಗೆ ಹೆಸರುವಾಸಿಯಾಗಿರುವ ಈ ಬಾಲಪ್ರತಿಭೆ ಆಳ್ವಾಸ್ ವಿರಾಸತ್‌ನಲ್ಲಿ ಮೊತ್ತಮೊದಲ ಬಾರಿ ತನ್ನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸುತ್ತಿದ್ದಾನೆ.

ದಿನಾಂಕ ೧೫ರಂದು ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆಗಾಯಕರುಗಳಾದ ಮುಂಬೈಯ ಶಾನ್ ಹಾಗೂ ಪಾಯಲ್ ದೇವ್ ಅವರು ಸಂಗೀತ ರಸಸಂಜೆಯ ಮೂಲಕ ಸಂಗೀತಾಸಕ್ತರ ಮನಸ್ಸನ್ನು ಸೂರೆಗೊಳ್ಳಲಿದ್ದಾರೆ. ಅವರನ್ನು ಅನುಸರಿಸಿಕೊಂಡು ಉಡುಪಿಯ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್‌ನ ಗಾಯನ ಕಲಾವಿದೆಯರಿಂದ ’ಗಾನಾರ್ಚನ’ ನಡೆಯಲಿದ್ದು ಸಂಗೀತ ರಸಿಕರ ಮನಸ್ಸನ್ನು ಮುದಗೊಳಿಸಲಿದೆ.

ಆಳ್ವಾಸ್ ವಿರಾಸತ್ ೨೦೧೭ರ ನೃತ್ಯವೈವಿಧ್ಯಗಳು

ದಿನಾಂಕ ೧೪ರಂದು ಶನಿವಾರ ’ಅಂಗರಾಗ’ದ ಮೂಲಕ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳ ಮಿಶ್ರ ನೃತ್ಯರೂಪಕವು ನಡೆಯಲಿದೆ. ಭುವನೇಶ್ವರದ ಆರಾಧನಾ ಡ್ಯಾನ್ಸ್ ಅಕಾಡೆಮಿಯ ಶಾಸ್ತ್ರೀಯ ಮತ್ತು ಜಾನಪದದ ೫೫ ಕಲಾವಿದರು ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯರೂಪಕದ ಮೂಲಕ ನೃತ್ಯಾಸಕ್ತರಿಗೆ ಅತ್ಯಪೂರ್ವ ಮನರಂಜನೆಯನ್ನು ನೀಡಲಿದ್ದಾರೆ. ಉಳಿದಂತೆ ಮೂರು ದಿನಗಳ ಕಾಲವೂ ಆಳ್ವಾಸ್‌ನ ಬಹುಸಂಖ್ಯೆಯ ಕಲಾವಿದರಿಂದ ದೇಶೀಯ, ಅಂತಾರಾಷ್ಟ್ರೀಯ ನೃತ್ಯ-ಸಾಹಸ ಕಲೆಗಳ ವೈವಿಧ್ಯಪೂರ್ಣ ಪ್ರದರ್ಶನವು ನಡೆಯಲಿವೆ.

ಆಳ್ವಾಸ್ ವಿರಾಸತ್‌ಗೆ ವಿಲಾಸ್ ನಾಯಕ್‌ರ ಚಿತ್ರದ ಮೆರುಗು

ಆಳ್ವಾಸ್ ವಿರಾಸತ್ ೨೦೧೭ರ ಎರಡನೆಯ ದಿನ ೧೪.೦೧.೨೦೧೭ನೆ ಶನಿವಾರ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ವಿಲಾಸ್ ನಾಯಕ್ ಅವರ ಕೈಚಳಕದಿಂದ ವೈವಿಧ್ಯಮಯ ಚಿತ್ರಗಳು ಮೂಡಿಬರಲಿವೆ.

ಆಳ್ವಾಸ್ ಶಿಲ್ಪ-ವರ್ಣ ವಿರಾಸತ್

ಜನವರಿ ೦೬ರಿಂದ ೧೫ರವರೆಗೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಆಳ್ವಾಸ್ ಶಿಲ್ಪವಿರಾಸತ್ ಮತ್ತು ರಾಷ್ಟ್ರಮಟ್ಟದ ಖ್ಯಾತ ಆದಿವಾಸಿ ಕಲಾವಿದರಿಂದ ಚಿತ್ರಕಲಾ ಶಿಬಿರವು ನಡೆಯಲಿವೆ. ಬುಡಕಟ್ಟು ಜನಾಂಗವಾದ ಬಸ್ತರ್‌ನ ಐವರು ಕಲಾವಿದರು ಲೋಹಶಿಲ್ಪದಲ್ಲಿ ಸ್ಥಳೀಯ ದೈವಗಳ ಕಂಚಿನ ಮುಖವಾಡಗಳನ್ನು ರಚಿಸಲಿದ್ದಾರೆ. ನಾಡಿನ ಹತ್ತು ಕಲಾವಿದರು ಮರದ ಕೆತ್ತನೆಯಲ್ಲಿ ೪ರಿಂದ ೬ ಅಡಿ ಎತ್ತರದ ಕೋಟಿ-ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ.

ಜನವರಿ ೧೧ರಿಂದ ೧೫ರವರೆಗೆ ರಾಷ್ಟ್ರಮಟ್ಟದ ಸಮಕಾಲೀನ ಕಲಾವಿದರ ಚಿತ್ರಕಲಾ ಶಿಬಿರವು ನಡೆಯಲಿದೆ. ದೇಶದ ೨೦ಕ್ಕಿಂತಲೂ ಹೆಚ್ಚು ಚಿತ್ರಕಲಾವಿದರು ಭಾಗವಹಿಸುವ ಆಳ್ವಾಸ್ ವರ್ಣವಿರಾಸತ್‌ನಲ್ಲಿ ಕಲಾವಿದರ ಕಲ್ಪನೆಯಲ್ಲಿ ಹಲವು ಕಲಾಕೃತಿಗಳು ಮೂಡಿಬಂದು ಕಲಾಪ್ರಿಯರ ಮನತಣಿಸಲಿವೆ. ಜನವರಿ ೧೧ರಿಂದ ೧೫ರವರೆಗೆ ನುಡಿಸಿರಿ ಸಭಾಂಗಣದಲ್ಲಿ ರಚನೆಗೊಂಡ ಕಲಾಕೃತಿಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.

ರೇವ ಶಂಕರ್ ಶರ್ಮಾ ಅವರಿಗೆ ಆಳ್ವಾಸ್ ವರ್ಣವಿರಾಸತ್ ೨೦೧೭ರ ಗೌರವ

ರಾಜಸ್ಥಾನದ ಖ್ಯಾತ ಚಿತ್ರಕಲಾವಿದ ರೇವ ಶಂಕರ್ ಶರ್ಮಾ ಅವರಿಗೆ ಆಳ್ವಾಸ್ ವರ್ಣವಿರಾಸತ್ ೨೦೧೭ರ ಗೌರವವನ್ನು ಜನವರಿ ೧೫ರಂದು ವಿರಾಸತ್ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ.೨೫,೦೦೦/- ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ದೀಪಾಲಂಕಾರದ ವೈಭವ ಹಾಗೂ ತಿಂಡಿ-ತಿನಿಸುಗಳ ಮಳಿಗೆ

ಆಳ್ವಾಸ್ ವಿರಾಸತ್‌ನ ಮೂರು ದಿನಗಳ ಕಾಲವೂ ಅತ್ಯದ್ಭುತವಾದ ದೀಪಾಲಂಕಾರದ ಮೂಲಕ ಈ ಉತ್ಸವಕ್ಕೆ ರಮ್ಯತೆಯನ್ನು, ಭವ್ಯತೆಯನ್ನು ನೀಡಲಾಗುವುದು. ಶುಚಿ-ರುಚಿಯಾದ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳು ಆಹಾರ ಪ್ರಿಯರ ಮನಸ್ಸನ್ನೂ ಉದರವನ್ನೂ ತಣಿಸುವಲ್ಲಿ ಯಶಸ್ಸಿಯಾಗಲಿವೆ.

ವಿಶಾಲ ಪಾರ್ಕಿಂಗ್ ಹಾಗೂ ಉಚಿತ ಬಸ್ಸಿನ ವ್ಯವಸ್ಥೆ

ದಿನವೊಂದಕ್ಕೆ ೪೦,೦೦೦ಕ್ಕಿಂತಲೂ ಹೆಚ್ಚಿನ ಕಲಾಪ್ರಿಯರು ಸೇರುವ ಈ ಮಹಾಉತ್ಸವಕ್ಕೆ ತಮ್ಮ ತಮ್ಮ ವಾಹನಗಳಲ್ಲಿ ಆಗಮಿಸುವವರಿಗೆ ವಿಶಾಲವಾದ ಹಾಗೂ ವ್ಯವಸ್ಥಿತವಾದ ವಾಹನ ನಿಲುಗಡೆಯ ಸ್ಥಳಾವಕಾಶವನ್ನು ಮಾಡಲಾಗಿದೆ. ಪೇಟೆಯಿಂದ ಪುತ್ತಿಗೆಗೆ ಮತ್ತು ಪುತ್ತಿಗೆಯಿಂದ ಪೇಟೆಯವರೆಗೆ ಉಚಿತ ಬಸ್ಸಿನ ವ್ಯವಸ್ಥೆಯನ್ನು ಉತ್ಸವದ ಸಂದರ್ಭದಲ್ಲಿ ಮಾಡಲಾಗುತ್ತದೆ. ಪುತ್ತಿಗೆಗೆ ಹೋಗುವ ಉಚಿತ ಸೇವೆಯ ಬಸ್ಸುಗಳ ನಿಲ್ದಾಣವು ಮೂಡುಬಿದಿರೆಯ ನಿಶ್ಮಿತಾ ಟವರ‍್ಸ್‌ನ ಬಳಿ ಇರುತ್ತದೆ.

ಆಳ್ವಾಸ್ ವಿರಾಸತ್ ೨೦೧೭ ಮೂರುದಿನಗಳ ಕಾಲ ನಡೆಯುತ್ತಿದ್ದು ಸಂಗೀತ ಮತ್ತು ನೃತ್ಯ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ. ಮೂರುದಿನಗಳ ಕಾಲದ ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

– ಡಾ| ಎಂ.ಮೋಹನ ಆಳ್ವ